ಮುಂಬೈ: ಮುಂಬೈನ ಡಿ.ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಶನಿವಾರ ನಡೆದ 2022 ಐಪಿಎಲ್ ನಲ್ಲಿ ಆಂಡ್ರೆ ರಸೆಲ್(48 ರನ್, 4 ವಿಕೆಟ್) ಅವರ ಆಲ್‌ರೌಂಡರ್ ಪ್ರದರ್ಶನದ ಹೊರತಾಗಿಯೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಎಂಟು ರನ್‌ಗಳ ರೋಚಕ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ತಂಡವನ್ನು 156 ರನ್‌ಗಳಿಗೆ ಕಟ್ಟಿ ಹಾಕಿದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್, ಗುಜರಾತ್ ವಿರುದ್ಧ ಗೆಲುವಿನ ಲಯಕ್ಕೆ ಮರಳುವ ಕನಸು ಕಂಡಿತ್ತು. ಆದರೆ, ಚೇಸಿಂಗ್ ವೇಳೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸತತ 4ನೇ ಸೋಲಿನ ಮುಖಭಂಗ ಅನುಭವಿಸಿತು.
ಕೆಕೆಆರ್ ಪರ ರಿಂಕು ಸಿಂಗ್(35) ಹಾಗೂ ಆಂಡ್ರೆ ರಸೆಲ್(48) ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಗುಜರಾತ್ ಬೌಲರ್‌ಗಳ ಎದುರು ಮಕಾಡೆ ಮಲಗಿದರು. ಆದರೆ, ಬೌಲಿಂಗ್‌ನಲ್ಲಿ ಒಂದು ಓವರ್‌ಗೆ ಕೇವಲ 5 ರನ್ ನೀಡಿ 4 ವಿಕೆಟ್ ಕಬಳಿಸಿದ್ದ ಆಂಡ್ರೆ ರಸೆಲ್ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಆಸರೆಯಾಗಿದ್ದರು.
ಕೇವಲ 25 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ 48 ರನ್ ಗಳಿಸಿ ಕೆಕೆಆರ್ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೆ, 20ನೇ ಓವರ್‌ನಲ್ಲಿ ಅಲ್ಝಾರಿ ಜೋಸೆಫ್ ಅವರ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಕೆಕೆಆರ್ ಗೆಲುವಿನ ಕನಸು ಭಗ್ನವಾಯಿತು.
Follow us on Social media