Breaking News

ಐಪಿಎಲ್ 2021 ಹರಾಜು: ಸ್ಫೋಟಕ ಆಟಗಾರರ ಖರೀದಿಗೆ ಆರ್ ಸಿಬಿ ಮುಂದು, ಸಮತೋಲಿತ ತಂಡ ಕಟ್ಟಲು ಸಿಎಸ್ ಕೆ ಹುಡುಕಾಟ!

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2021 ರ ಆವೃತ್ತಿಯು ಈ ವರ್ಷದ ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದ್ದು, ಇದರ ನಿಮಿತ್ತ ಚೆನ್ನೈನಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಪ್ರಾರಂಭವಾಗಲಿದೆ.

ಹೌದು.. ಐಪಿಎಲ್ ಟೂರ್ನಿ ಆರಂಭಕ್ಕೆ ಕೇವಲ ಎರಡು ತಿಂಗಳುಗಳು ಮಾತ್ರ ಬಾಕಿ ಇದ್ದು, ಈಗಾಗಲೇ ಎಲ್ಲ ಸಿದ್ಧತೆಗಳೂ ಭರದಿಂದ ಸಾಗಿದೆ. ಅಂತೆಯೇ ಆಟಗಾರರ ಮಿನಿ ಹರಾಜು ಪ್ರಕ್ರಿಯೆಗೂ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ ಎಂಟು ಫ್ರಾಂಚೈಸಿಗಳು ಚೆನ್ನೈನಲ್ಲಿ ಗುರುವಾರ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ.  

ಈ ವರ್ಷದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 292 ಆಟಗಾರರು ಒಳಪಡಲಿದ್ದು, ಈ ಎಲ್ಲ ಕ್ರಿಕೆಟಿಗರನ್ನು ಎಂಟು ಫ್ರಾಂಚೈಸಿಗಳು ಶಾರ್ಟ್‌ಲಿಸ್ಟ್ ಮಾಡಿದ್ದಾರೆ. ಬಹುತೇಕ ಫ್ರಾಂಚೈಸಿಗಳು 2020 ರ ಐಪಿಎಲ್‌ನಲ್ಲೇ ಇದ್ದ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದು, ಬಿಡುಗಡೆ ಮಾಡಿರುವ ಆಟಗಾರರ ಹರಾಜು ನಾಳೆ ನಡೆಯಲಿದೆ. ಈ ಮಿನಿ ಹರಾಜಿನಲ್ಲಿ ಒಟ್ಟು 164 ಭಾರತೀಯ ಆಟಗಾರರು, 125 ವಿದೇಶಿ ಆಟಗಾರರು ಮತ್ತು ಸಹಾಯಕ ರಾಷ್ಟ್ರಗಳ 3 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಒಳಪಡಲಿದ್ದಾರೆ.

ಎಲ್ಲ ಫ್ರಾಂಚೈಸಿಗಳು ಉತ್ತಮ ಬೆಲೆ ನೀಡಿ ಉತ್ತಮ ಆಟಗಾರರನ್ನು ಖರೀದಿ ಮಾಡಲು ಸಿದ್ಧವಾಗಿ ನಿಂತಿವೆ. ಈ ಪಟ್ಟಿಯಲ್ಲಿ ಆಟಗಾರನೋರ್ವನಿಗೆ ಬಿಡ್ ಮಾಡಲಾಗುವ ಗರಿಷ್ಛ ಮೂಲಬೆಲೆಯನ್ನು 2 ಕೋಟಿ ರೂ ಎಂದು ನಿಗದಿ ಪಡಿಸಲಾಗಿದ್ದು. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಆಟಗಾರರು ಅಂದರೆ ಹರ್ಭಜನ್ ಸಿಂಗ್ ಮತ್ತು ಕೇದಾರ್ ಜಾದವ್ ಇದ್ದಾರೆ. ಅಲ್ಲದೆ ವಿದೇಶಿ ಆಟಗಾರರಾದ ಗ್ಲೆನ್ ಮ್ಯಾಕ್ಸ್ ವೆಲ್, ಸ್ಟೀವ್ ಸ್ಮಿತ್, ಶಕೀಬ್ ಅಲ್ ಹಸನ್, ಮೊಯೀನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಪ್ಲಂಕೆಟ್, ಜೇಸನ್ ರಾಯ್, ಮತ್ತು ಮಾರ್ಕ್ ವುಡ್ ಗರಿಷ್ಛ ಮೂಲಬೆಲೆಯ ಪಟ್ಟಿಯಲ್ಲಿದ್ದಾರೆ.  

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)
ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಬಿಡ್ಡಿಂಗ್ ಖಾತೆಯಲ್ಲಿ 35.4 ಕೋಟಿ ರೂಗಳನ್ನು ಹೊಂದಿದೆ. ಈ ಹರಾಜಿನಲ್ಲಿ ಆರ್ ಸಿಬಿ ಒಟ್ಟು 11 ಆಟಗಾರರನ್ನು ಖರೀದಿ ಮಾಡಬಹುದು. ಈ 11ರಲ್ಲಿ 3 ಮಂದಿ ವಿದೇಶಿ ಆಟಗಾರರನ್ನು ಹೊಂದುವ ಅವಕಾಶ ಆರ್ ಸಿಬಿಗೆ ಇದೆ. ಹರಾಜಿಗೂ ಮೊದಲು, ಆರ್ ಸಿಬಿಯಲ್ಲಿದ್ದ ಕ್ರಿಸ್ ಮೋರಿಸ್, ಮೊಯೀನ್ ಅಲಿ, ಆರನ್ ಫಿಂಚ್ ರನ್ನು ಆರ್ ಸಿಬಿ ತಂಡದಿಂದ ಬಿಡುಗಡೆ ಮಾಡಿತ್ತು. ಇದೀಗ ಇವರ ಜಾಗಕ್ಕೆ ಉತ್ತಮ ಕ್ರಿಕೆಟ್ ತಾರೆಯರನ್ನು ಕರೆತರಲು ಆರ್ ಸಿಬಿ ಯೋಜನೆ ರೂಪಿಸಿದೆ. ಪ್ರಮುಖವಾಗಿ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಗ್ಲೆನ್ ಮ್ಯಾಕ್ಸ್‌ವೆಲ್‌ ಮೇಲೆ ಆರ್ ಸಿಬಿ ಬಿಡ್ ಮಾಡಬಹುದು.  ಅಂತೆಯೇ ತಂಡಕ್ಕೆ ಗುಣಮಟ್ಟದ ಆಲ್ ರೌಂಡರ್ ಗಳತ್ತ ಚಿಂತನೆ ನಡೆಸಿದರೆ ಈ ಪಟ್ಟಿಯಲ್ಲಿ ಶಕೀಬ್ ಅಲ್ ಹಸನ್ ಉತ್ತಮ ಆಯ್ಕೆ ಎನ್ನಬಹುದು. ಇನ್ನು ಕೆಳ ಕ್ರಮಾಂಕದ ಭರ್ತಿಗಾಗಿ ಕೇದಾರ್ ಜಾಧವ್ ಅಥವಾ ಅರ್ಜುನ್ ತೆಂಡೂಲ್ಕರ್ ಮೇಲೆ ಆರ್ ಸಿಬಿ ಫ್ರಾಂಚೈಸಿಗಳ ಗಮನ ಹರಿಸಿದರೂ ಅಚ್ಚರಿ ಏನಿಲ್ಲ. 

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ)
ಎಂಎಸ್ ಧೋನಿ ನೇತೃತ್ವದ ಸಿಎಸ್ ಕೆ ತಂಡವು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಸ್ಥಿರ ತಂಡ ಎಂಬ ಖ್ಯಾತಿ ಹೊಂದಿದೆ. ಹೀಗಾಗಿ ಪ್ರಬಲ ತಂಡ ಕಟ್ಟಲು ಸಿಎಸ್ ಕೆ ಫ್ರಾಂಚೈಸಿಗಳು ಯೋಜನೆ ರೂಪಿಸಿದ್ದಾರೆ. ಈ ಹಿಂದಿನ ಅಂದರೆ 2020ರ ಆವೃತ್ತಿಯಲ್ಲಿ ಸಿಎಸ್ ಕೆ ಪ್ಲೇಆಫ್ ತಲಪುಲೂ ಆಗದೇ ತೀವ್ರ ಮುಖಭಂಗ ಅನುಭವಿಸಿತ್ತು. ತಂಡದ ಆಟಗಾರರ ಕಳಪೆ ಪ್ರದರ್ಶನ ತಂಡಕ್ಕೆ ಮುಳುವಾಗಿತ್ತು. ಇದೇ ಕಾರಣಕ್ಕೆ ಹಾಲಿ ವರ್ಷದ ಆವೃತ್ತಿ ಸಿಎಸ್ ಕೆ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರಲಿದ್ದು, ಬಲಿಷ್ಠ ತಂಡ ಕಟ್ಟಲು ಸಿಎಸ್ ಕೆ ಫ್ರಾಂಚೈಸಿಗಳು ಮುಂದಾಗುವ ಸಾಧ್ಯತೆ ಇದೆ. ಸಿಎಸ್ ಕೆಯಲ್ಲಿ ಹಿರಿಯ ಆಟಗಾರರೇ ತುಂಬಿದ್ದು, ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಡ್ವೇನ್ ಬ್ರಾವೋ, ಇಮ್ರಾನ್ ತಾಹಿರ್ ಅವರಂತಹ ಅನುಭವಿ ಆಟಗಾರರು ತಂಡದಲಿದ್ದಾರೆ. ಹೀಗಾಗಿ ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಸಿಎಸ್ ಕೆ ಫ್ರಾಂಚೈಸಿಗಳು ಯುವಆಟಗಾರರತ್ತ ಒಲವು ತೋರುವ ಸಾಧ್ಯತೆ ಹೆಚ್ಚು.  ಸಿಎಸ್ ಕೆ ತನ್ನ ತಂಡದಿಂದ ಹರ್ಭಜನ್ ಸಿಂಗ್, ಕೇದಾರ್ ಜಾಧವ್, ಮುರಳಿ ವಿಜಯ್, ಮತ್ತು ಪಿಯೂಷ್ ಚಾವ್ಲಾ ಅವರನ್ನು ಬಿಡುಗಡೆ ಮಾಡಿದೆ. ತಂಡದ ಖಾತೆಯಲ್ಲಿ 19.9 ಕೋಟಿ ರೂ ಇದ್ದು. ಈ ಹಣದಿಂದ ಸಿಎಸ್ ಕೆ ಆರು ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಲು ನೋಡಬಹುದು. ಹರಾಜಿನಲ್ಲಿ ಕೇವಲ ಓರ್ವ ವಿದೇಶಿ ಆಟಗಾರ ಖರೀದಿಗೆ ಸಿಎಸ್ ಕೆ ಅವಕಾಶವಿದ್ದು, ಇಂಗ್ಲೆಂಡ್‌ನ ಡೇವಿಡ್ ಮಲನ್ ಮೇಲೆ ಸಿಎಸ್ ಕೆ ಹೆಚ್ಚಿನ ಬಿಡ್ ಮಾಡಬಹುದು.

ಕಿಂಗ್ಸ್ ಇಲೆವೆನ್ ಪಂಜಾಬ್
ಕಿಂಗ್ಸ್ ಇಲೆವೆನ್ ಪಂಜಾಬ್ ಈ ಹರಾಜಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಡ್ ಮಾಡಲು ಸಜ್ಜಾಗಿದೆ. ಕಾರಣ ಪಂಜಾಬ್ ಫ್ರಾಂಚೈಸಿಗಳ ಬಳಿ  53.20 ಕೋಟಿ ರೂ. ಇದ್ದು, ತಂಡದ ಹಿರಿಯ ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್, ಮುಜೀಬ್ ಉರ್ ರಹಮಾನ್, ಶೆಲ್ಡನ್ ಕಾಟ್ರೆಲ್, ಮತ್ತು ಜಿಮ್ಮಿ ನೀಶಮ್ ರಂತಹ ದಿಗ್ಗಜ ಆಟಗಾರರನ್ನು ತಂಡದಿಂದ ಕೈ ಬಿಡಲಾಗಿದೆ. ಹೀಗಾಗಿ ಆರ್ ಸಿಬಿ ಬಳಿಕ ಹೆಚ್ಚು ವಿದೇಶಿ ಆಟಗಾರರನ್ನು ಖರೀದಿ ಮಾಡುವ ಅವಕಾಶ ಪಂಜಾಬ್ ತಂಡಕ್ಕಿದ್ದು, ವಿದೇಶಿ ಸ್ಟಾರ್ ಆಟಗಾರರ ಮೇಲೆ ಪಂಜಾಬ್ ಫ್ರಾಂಚೈಸಿಗಳು ಹೆಚ್ಚಿನ ಮೊತ್ತದ ಬಿಡ್ ಮಾಡುವ ಸಾಧ್ಯತೆ ಇದೆ. ಇನ್ನು ತಂಡದಲ್ಲಿ ಕೆಎಲ್ ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ರಂತಹ ಪ್ರಬಲ ಬ್ಯಾಟ್ಸ್ ಮನ್ ಗಳಿದ್ದರೂ ಸ್ಫೋಟಕ ಆಟವಾಡುವ ಆಟಗಾರರ ಕೊರತೆ ನೀಗಿಸಲು ವಿದೇಶಿ ಸ್ಫೋಟಕ ಬ್ಯಾಟ್ಸ್ ಮನ್ ಗಳ ಮೇಲೆ ಪಂಜಾಬ್ ಫ್ರಾಂಚೈಸಿಗಳು ಗಮನ ಕೇಂದ್ರೀಕರಿಸಬಹುದು. ಒಂದು ವೇಳೆ ಅನುಭವಿ ಆಟಗಾರರತ್ತ ಗಮನ ಕೇಂದ್ರೀಕರಿಸಿದರೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್‌, ಹರ್ಭಜನ್‌ ಸಿಂಗ್, ರವಿ ಬಿಷ್ಣೋಯ್ ಉತ್ತಮ ಆಯ್ಕೆ ಎನ್ನಬಹುದು. 

ವೇಗಿಗಳ ವಿಭಾಗದಲ್ಲಿ ಪಂಜಾಬ್ ಗೆ 14 ಪಂದ್ಯಗಳನ್ನು ಆಡಬಲ್ಲ ವೇಗಿಗಳ ಅವಶ್ಯಕತೆ ಇದೆ. ಹೀಗಾಗಿ ಪಂಜಾಬ್ ತಂಡ ಮಹಮದ್ ಶಮಿ, ಅರ್ಷ್‌ದೀಪ್ ಸಿಂಗ್ ರಂತಹ ಅಟಗಾರರ ಮೇಲೆ ಗಮನ ಕೇಂದ್ರೀಕರಿಸಲಿದೆ.  ಅಂತೆಯೇ ವಿದೇಶಿ ವೇಗಿಗಳಾದ ಝೈ ರಿಚರ್ಡ್ಸನ್ ಅಥವಾ ಮಾರ್ಕ್ ವುಡ್ ರ ಮೇಲೂ ಬಿಡ್ ಮಾಡುವ ಸಾಧ್ಯತೆ ಇದೆ. 

ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ ರಾಯಲ್ಸ್ ತಂಡದ ಖಾತೆಯಲ್ಲಿ 34.85 ಕೋಟಿ ರೂ.ಗಳಿದ್ದು, ಸ್ಟೀವ್ ಸ್ಮಿತ್‌, ಓಶೇನ್ ಥಾಮಸ್ ಮತ್ತು ಟಾಮ್ ಕುರ್ರನ್ ರನ್ನುತಂಡದಿಂದ ಬಿಡುಗಡೆ ಮಾಡಲಾಗಿದೆ. ರಾಜಸ್ಥಾನ ತಂಡ ಹಾಲಿ ಹರಾಜಿನಲ್ಲಿ ಗರಿಷ್ಠ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಪಡೆದಿದೆ.   ರಾಜಸ್ಥಾನಕ್ಕೆ ಪ್ರಮುಖವಾಗಿ ಮಧ್ಯಮ ಕ್ರಮಾಂಕದ ಸ್ಥಾನ ತುಂಬಬಲ್ಲ ಆಟಗಾರ ಬೇಕಿದ್ದು, ಈ ನಿಟ್ಟಿನಲ್ಲಿ ಡೇವಿಡ್ ಮಲನ್, ಮಾರ್ನಸ್ ಲ್ಯಾಬುಸ್ಚಾಗ್ನೆ ಅಥವಾ ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ಆಟಗಾರರ ಮೇಲೆ ಬಿಡ್ ಮಾಡಬಹುದು.  ಬೌಲಿಂಗ್ ವಿಭಾಗದಲ್ಲಿ ಶ್ರೇಯಸ್ ಗೋಪಾಲ್, ರಾಹುಲ್ ತಿವಾಟಿಯಾ ಮತ್ತು ಮಾಯಾಂಕ್ ಮಾರ್ಕಂಡೆ ಉತ್ತಮ ಲಯದಲ್ಲಿದ್ದು, ಹೆಚ್ಚುವರಿಯಾಗಿ ವಿದೇಶಿ ಆಟಗಾರರಾದ ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ಮತ್ತು ಟಿಮ್ ಸೌಥಿ ಮೇಲೆ ಬಿಡ್ ಮಾಡಬಹುದು. 

ಉಳಿದಂತೆ ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಮತ್ತು ಕೋಲ್ಕತಾ ನೈಟ್ ರೈಡರ್ಸ್ ಈ ಎಲ್ಲಾ ನಾಲ್ಕು ಫ್ರಾಂಚೈಸಿಗಳು ಐಪಿಎಲ್ 2020ರಲ್ಲಿ ಕಾಣಿಸಿಕೊಂಡ ಹೆಚ್ಚಿನ ತಂಡವನ್ನೇ ಉಳಿಸಿಕೊಂಡಿವೆ. ಹಾಲಿ ಹರಾಜು ಪ್ರಕ್ರಿಯೆಯಲ್ಲಿ ಈ ತಂಡಗಳು ಹೆಚ್ಚಾಗಿ ಓರ್ವ ಅಥವಾ ಇಬ್ಬರು ವಿದೇಶಿ ಆಟಗಾರರ ಮೇಲೆ ಬಿಡ್ ಮಾಡಬಹುದು.  

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×