ನವದೆಹಲಿ: ಕೊರೋನಾ ಮಹಾಮಾರಿ ಕಾಲದಲ್ಲೇ ಯುನೈಟೆಡ್ ಅರಬ್ ಎಮಿರೆಟ್ಸ್(ಯುಎಇ)ನಲ್ಲಿ ಐಪಿಎಲ್ 2020 ಪಂದ್ಯಾವಳಿ ನಡೆಯಲಿದ್ದು ಶೇ. 30-50ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಲು ಚಿಂತನೆ ನಡೆಸಿದೆ.
ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಅವರು ಅದಾಗಲೇ ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಐಪಿಎಲ್ ನಡೆಸುವುದಾಗಿ ಪ್ರಕಟಿಸಿದ್ದು ಇನ್ನು ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ನೀಡುವುದು, ಬಿಡುವುದು ಯುಎಇಗೆ ಬಿಟ್ಟಿದ್ದು ಎಂದು ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಎಇ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮುಬಾಶೀರ್ ಉಸ್ಮಾನಿ ಅವರು, ಬಿಸಿಸಿಐ ಅಧಿಕೃತವಾಗಿ ನಮಗೆ ಏನು ಹೇಳಿಲ್ಲ. ಬಿಸಿಸಿಐ ಕೂಡ ಭಾರತದ ಕೇಂದ್ರ ಸರ್ಕಾರದ ಸೂಚನೆಗಾಗಿ ಕಾಯುತ್ತಿದ್ದಾರೆ ಎಂದರು.
ಬಿಸಿಸಿಐ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ, ಮಾರ್ಗಸೂಚಿಗಳು, ವೇಳಾಪಟ್ಟಿ ಮತ್ತಿತರ ದಾಖಲೆ ಪತ್ರಗಳೊಂದಿಗೆ ನಮ್ಮ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಮುಬಾಶೀರ್ ಉಸ್ಮಾನಿ ಹೇಳಿದ್ದಾರೆ.
ಕೊರೋನಾ ಸಂದರ್ಭದಲ್ಲೂ ಯುಎಇಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಶೇ. 30-50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಐಪಿಎಲ್ ಪಂದ್ಯವಳಿಗೂ ಅಷ್ಟೇ ಸಂಖ್ಯೆಯ ಜನರಿಗೆ ಅವಕಾಶ ನೀಡಬಹುದು. ಆದರೆ ಅಂತಿಮ ನಿರ್ಧಾರ ಸರ್ಕಾರದ ಮೇಲೆ ನಿಂತಿದೆ ಎಂದರು.
ಕೊರೋನಾ ಇಡೀ ಜಗತ್ತನ್ನು ಕಂಗೆಡಿಸಿದ್ದು ತನ್ನ ಕಂದಬ ಬಾಹುವನ್ನು ವಿಸ್ತರಿಸುತ್ತಾ ಸಾಗಿದೆ. ಆದರೆ ಯುಎಇಯಲ್ಲಿ ಮಾತ್ರ ಇಲ್ಲಿಯವರೆಗೂ ಕೇವಲ ಆರು ಸಾವಿರ ಕೊರೋನಾ ಪ್ರಕರಣಗಳು ಮಾತ್ರ ಪತ್ತೆಯಾಗಿದೆ.
Follow us on Social media