ಬೆಂಗಳೂರು: ರಾಜ್ಯದ ಎಲ್ಲ 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆಯಾಗಲಿ ಎಂದು ಸವಾಲು ಹಾಕಿ, ವಿವಾದ ಸೃಷ್ಟಿಸಿದ್ದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ತಮ್ಮ ಹೇಳಿಕೆಯಿಂದ ಯಾವುದೇ ಶಾಸಕರಿಗೆ ನೋವಾಗಿದ್ದಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ. ನಮ್ಮ ಹದಿನೇಳು ಜನ ಶಾಸಕರ( ಕಾಂಗ್ರೆಸ್, ಜೆಡಿಎಸ್ ನಿಂದ ಬಿಜೆಪಿಗೆ ಬಂದವರ) ವಿರುದ್ದ ತೇಜೋವಧೆ ಯತ್ನ ನಡೆಸಿದ್ದ ಕೆಲ ನಾಯಕರ ವಿರುದ್ಧ ಮಾತ್ರ ಹೇಳಿಕೆ ನೀಡುವ ಯತ್ನ ಮಾಡಿದ್ದೇನೆ, ಎಲ್ಲಾ ಶಾಸಕರಿಗೆ ನೋವು ಉಂಟು ಮಾಡುವ ಉದ್ದೇಶ ತಮ್ಮದ್ದಲ್ಲ ಎಂದು ಟ್ವೀಟ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕೆಲ ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆ ಪ್ರಶ್ನಿಸಿ ಮಾಧ್ಯಮಗಳಿಗೆ ನೀಡಿದ್ದ ತಮ್ಮ ಹೇಳಿಕೆ ಬೇರೆ ಬೇರೆ ಆಯಾಮ ಪಡೆದುಕೊಂಡಿದೆ. ಎಲ್ಲಾ ಶಾಸಕ ಮಿತ್ರರ ಬಗ್ಗೆ ತಾವು ಅಪಾರ ಗೌರವ ಇರಿಸಿಕೊಂಡಿರುವುದಾಗಿ ಡಾ. ಸುಧಾಕರ್ ಹೇಳಿದ್ದಾರೆ.
ತಮ್ಮ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕಾದ “ಮಹಾನಾಯಕರು” ಅರ್ಥ ಮಾಡಿಕೊಂಡರೆ ಸಾಕು . ಇಡೀ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆದು ರಾಜಕೀಯ ದ್ವೇಷ ಸಾಧಿಸಲು ಹೊರಟಿರುವ ಮಹಾನಾಯಕರ ಮುಖವಾಡ ಕಳಚುವ ಉದ್ದೇಶ ತಮ್ಮ ಹೇಳಿಕೆಯ ಹಿಂದೆ ಇತ್ತು ಎಂದು ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸುಧಾಕರ್, ನಮ್ಮ ತೇಜೋವಧೆ ಮಾಡಲು ಹೊರಟವರ ಉದ್ದೇಶ ಈಡೇರಲ್ಲ ಎಂದು ಹೇಳಿದ್ದಾರೆ.
Follow us on Social media