Breaking News

ಎಸ್‍ಡಿಪಿಐ ನಿಷೇಧದ ಬಗ್ಗೆ ಯಾವುದೇ ನಿರ್ದಿಷ್ಟ ತೀರ್ಮಾನ ಕೈಗೊಂಡಿಲ್ಲ: ಸಚಿವ ಮಾಧುಸ್ವಾಮಿ ಸ್ಪಷ್ಟನೆ

ಬೆಂಗಳೂರು: ಬೆಂಗಳೂರು ಗಲಭೆ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಎಸ್‌ಡಿಪಿಐ ಸಂಘಟನೆ ನಿಷೇಧಕ್ಕೆ ಕಾನೂನಾತ್ಮಕ ಮಾರ್ಗಗಳ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜೆ ಹಳ್ಳಿ ಗಲಭೆ ಹಾಗೂ ಎಸ್‌ಡಿಪಿಐ ನಿಷೇಧದ ಕುರಿತಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಎಸ್ ಡಿಪಿಐ ನಿಷೇಧಕ್ಕೆ ಕಾನೂನಾತ್ಮಕ ಮಾರ್ಗಗಳ ಕುರಿತಾಗಿ ಪರಿಶೀಲನೆ ನಡೆಸಿ ಸರ್ಕಾರ ಮುಂದಿನ ಕ್ರಮ ಜರಗಿಸಲಾಗುತ್ತದೆ.  ಕಾನೂನಿನ ಪ್ರಕಾರ ಏನು ಮಾಡಬೇಕೆಂಬ ಕುರಿತಾಗಿ ಚರ್ಚೆ ನಡೆದಿದ್ದು, ಸಂಘಟನೆಯ ನಿಷೇಧಕ್ಕೆ ನಮ್ಮ ಬಳಿ ಸಮರ್ಪಕವಾಗಿರುವ ಪರಾವೆ ಇಲ್ಲದೇ ಇರುವುದರಿಂದ ಸದ್ಯ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಈ ಕುರಿತಾಗಿ ಪೊಲೀಸ್ ಇಲಾಖೆಯಿಂದ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.  ಇಲಾಖೆಯ ವರದಿ ಬಂದ ಬಳಿಕವಷ್ಟೇ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇವೆ. ಎಸ್‌ಡಿಪಿಐ ರಾಜಕೀಯ ಪಕ್ಷವಾಗಿದ್ದು ನಿಷೇಧ ಮಾಡಲು ಕಾನೂನಾತ್ಮಕ ಸಾಧ್ಯಾಸಾಧ್ಯತೆಗಳ ಕುರಿತಾಗಿ ಪರಿಶೀಲನೆ ನಡೆಸಿ ಅಗತ್ಯ ಬಿದ್ದರೆ ಕಾನೂನಿನ ತಿದ್ದುಪಡಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು. 

ಅಂತೆಯೇ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗಳಲ್ಲಿ ಆರೋಪಿಗಳಿಂದ ನಷ್ಟ ಭರ್ತಿ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ 1981 ರಲ್ಲಿ ಸಾರ್ವಜನಿಕ‌‌ ಆಸ್ತಿ ನಾಶ ತಡೆ ಕಾಯ್ದೆ ತಂದಿದೆ. ಈ ಕಾಯ್ದೆ ಪ್ರಕಾರ ನಷ್ಟ ಮತ್ತು ಪರಿಹಾರ ನಿಗದಿಗೆ ಆಯುಕ್ತರ ನೇಮಕ ಮಾಡಬೇಕು. ಈ ಮಧ್ಯೆ ಇದಕ್ಕಿಂತ ಉಪಯುಕ್ತ  ಕಾಯ್ದೆ ಯುಪಿಯಲ್ಲಿ ಜಾರಿ ಬಂದಿದೆ ಅನ್ನೋ ಸಲಹೆ ಬಂದಿದೆ. ನಷ್ಟ ಭರ್ತಿ ಮತ್ತು ಪರಿಹಾರ ನಿಗದಿಗೆ ಹೊಸ ಕಾನೂನು ತರುವ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಹೋರಾಟಗಳ ಸಂದರ್ಭದಲ್ಲಿ ದಾಖಲಾಗಿದ್ದ64 ಕ್ರಿಮಿನಲ್ ಕೇಸ್‌ಗಳು ರದ್ದು
ಇದೇ ವೇಳೆ  ವಿವಿಧ ಹೋರಾಟಗಳ ಸಂದರ್ಭದಲ್ಲಿ ದಾಖಲಾಗಿದ್ದ 64 ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದು ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಹೋರಾಟ, ರಾಜಕೀಯ, ಧಾರ್ಮಿಕ ಸಂಘರ್ಷದ ಹೋರಾಟದಲ್ಲಿ ದಾಖಲಾಗಿದ್ದ ಒಟ್ಟು 64 ಕ್ರಿಮಿನಲ್  ಪ್ರಕರಣಗಳನ್ನು ಸರ್ಕಾರ ಕೈಬಿಡಲು ನಿರ್ಧರಿಸಿದೆ. ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣ, ಬೆಳಗಾವಿ ನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಗಲಭೆ ಪ್ರಕರಣವೂ ಇದರಲ್ಲಿ ಒಳಗೊಂಡಿದೆ ಎಂದು ಮಾಧುಸ್ವಾಮಿ ತಿಳಿಸಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×