ಬೆಂಗಳೂರು: ಕಳೆದ ಹಲವು ದಿನಗಳಿಂದ ಎಳೆಯ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡುವ ಕುರಿತಂತೆ ನಡೆಯುತ್ತಿದ್ದ ಚರ್ಚೆಗೆ ಇಂದು ತೆರೆ ಬಿದ್ದಿದ್ದು, ಎಲ್.ಕೆ.ಜಿ. – ಯುಕೆಜಿ ಸೇರಿದಂತೆ 5 ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡುವುದಕ್ಕೆ ಬ್ರೇಕ್ ಹಾಕಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಪುಟ್ಟ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡಿದರೆ ಮಾನಸಿಕ ಒತ್ತಡ ಬಿದ್ದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೇ ಆನ್ ಲೈನ್ ಶಿಕ್ಷಣದ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುವುದಕ್ಕೂ ಕಡಿವಾಣ ಹಾಕಲಾಗಿದೆ.
ರಾಜ್ಯದಲ್ಲಿನ ಎಲ್ಲಾ ಎಲ್ ಕೆ ಜಿ, ಯುಕೆಜಿ, ಪ್ರಾಥಮಿಕ ಹಂತದ ತರಗತಿಗಳಿಗೆ ಈ ಕೂಡಲೇ ಆನ್ ಲೈನ್ ಟೀಚಿಂಗ್ ಹೆಸರಿನಲ್ಲಿ ನಡೆಯುತ್ತಿರುವ ತರಗತಿಗಳನ್ನು ತಕ್ಷಣದಿಮ್ದ ನಿಲ್ಲಿಸಬೇಕು. ಜೊತೆಗೆ ಆನ್ ಲೈನ್ ಟೀಚಿಂಗ್ ನೆಪದಲ್ಲಿ ಶುಲ್ಕ ಪಡೆಯುವುದನ್ನು ತಕ್ಷಣದಿಂದಲೇ ರದ್ದುಗೊಳಿಸಬೇಕು ಎಂಬುದಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಘೋಷಣೆ ಮಾಡಿದರು.
Follow us on Social media