ಬೆಂಗಳೂರು: ಕೊರೊನಾ ರೋಗಿಗಳ ಚಿಕಿತ್ಸೆಗೆ ಶಿವಾಜಿನಗರದ ಬ್ರಾಡ್ ವೇ ರಸ್ತೆ ಬಳಿ 200 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಇನ್ನು ಎರಡು ವಾರಗಳೊಳಗೆ ಕಾರ್ಯಾರಂಭ ಮಾಡಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬ್ರಾಡ್ ವೇ ರಸ್ತೆಯ ಬಳಿ ಬಿಬಿಎಂಪಿ ಕಟ್ಟಡದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಕೊರೊನಾ ರೋಗಿಗಳಿಗಾಗಿ ಈ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಮೊದಲಾದ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಜತೆಗೆ ಸಿಬ್ಬಂದಿ ನಿಯೋಜನೆಯೂ ಮಾಡಲಾಗಿದೆ.
“ಬ್ರಾಡ್ ವೇ ರಸ್ತೆ ಬಳಿ 200 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಸಿದ್ಧವಾಗುತ್ತಿದೆ. ಇದರ ಸಮರ್ಪಕ ನಿರ್ವಹಣೆಗೆ ಅಗತ್ಯವಿರುವ ವೈದ್ಯರು, ಶುಶ್ರೂಷಕರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇನ್ನು ಎರಡು ವಾರದೊಳಗೆ ಕಾರ್ಯಾರಂಭಗೊಳ್ಳಲಿದೆ” ಎಂದು ಸಚಿವರು ಹೇಳಿದ್ದಾರೆ.
ಆಸ್ಪತ್ರೆ ನಿರ್ಮಿಸಲು ಇನ್ಫೋಸಿಸ್ ಪ್ರತಿಷ್ಠಾನ ನೆರವು ನೀಡಿದೆ. ಪ್ರತಿಷ್ಠಾನಕ್ಕೆ ಮತ್ತು ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಸರ್ಕಾರ ಮತ್ತು ಜನರ ಪರವಾಗಿ ಸಚಿವರು ಕೃತಜ್ಞತೆ ಸಲ್ಲಿಸಿದ್ದಾರೆ.
ವೈದ್ಯರಿಗೆ ಧನ್ಯವಾದ
ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿರುವ ಹಾವೇರಿ ಜಿಲ್ಲೆಯ 570 ಖಾಸಗಿ ಆಸ್ಪತ್ರೆ ವೈದ್ಯರು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ಶ್ಲಾಘಿಸಿದ್ದಾರೆ.