ಬೆಂಗಳೂರು: ಸಮಾಜಸೇವೆಯ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿದ್ದ ಕೆಲ ಸ್ವಯಂ ಸೇವಾ ಸಂಸ್ಥೆ ಮತ್ತು ಟ್ರಸ್ಟ್’ಗಳ ಮೇಲೆ ಎನ್ಐಎ ದಾಳಿ ನಡೆಸಿದೆ.
ಬುಧವಾರ ಬೆಂಗಳೂರಿನ ಒಂದು ಸ್ಥಳ ಹಾಗೂ ಕಾಶ್ಮೀರದ ಒಟ್ಟು 10 ಪ್ರದೇಶಗಳ ಮೇಲೆ ಎನ್ಐಎ ದಾಳಿ ನಡೆಸಿದ್ದು, ತೀವ್ರ ಪರಿಶೀಲನೆ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಜಮ್ಮು-ಕಾಶ್ಮೀರದ ಸಿವಿಲ್ ಸೊಸೈಟಿಯ ಸಹ ಸಂಚಾಲಕ ಖುರ್ರಂ ಪರ್ವೇಜ್ ಹಾಗೂ ಅವರ ಸಹಚರರಾದ ಪತ್ರಕರ್ತ ಪರ್ವೇಜ್ ಬುಖಾರಿ, ಬೆಂಗಳೂರು ಮೂಲದ ಸ್ವಾತಿ ಶೇಷಾದ್ರಿ, ಪರ್ವೇಜ್ ಅಹ್ಮದ್ ಮಟ್ಟಾ, ‘ಅಸೋಸಿಯೇಷನ್ ಆಫ್ ಪೇರೆಂಟ್ಸ್ ಆಫ್ ಡಿಸ್‌ಅಪಿಯರ್ಡ್ ಪರ್ಸನ್ಸ್’ ಸಂಸ್ಥೆಯ ಮುಖ್ಯಸ್ಥೆ ಪ್ರರ್ವಿನಾ ಅಹಾಂಜರ್ ಸೇರಿದಂತೆ ಹಲವರ ನಿವಾಸದ ಮೇಲೆ ದಾಳಿ ನಡೆದಿದೆ. ಸ್ಥಳೀಯ ಪೊಲೀಸ್ ಹಾಗೂ ಅರೆಸೇನಾ ಪಡೆಗಳ ನೆರವಿನೊಂದಿಗೆ ಎನ್‌ಐಎ ಶ್ರೀನಗರ, ಬಂಡಿಪೋರಾ ಹಾಗೂ ಬೆಂಗಳೂರಿನಲ್ಲಿ ಈ ಶೋಧ ಕಾರ್ಯಾಚರಣೆ ನಡೆಸಿದೆ. ಎನ್‌ಜಿಒ ಅಥರೌಟ್ ಮತ್ತು ಜೆಕೆ ಟ್ರಸ್ಟ್‌ಗಳ ಕಚೇರಿ ಮೇಲೂ ಶೋಧ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಈ ಎನ್‌ಜಿಒ ಹಾಗೂ ಟ್ರಸ್ಟ್‌ಗಳು ದತ್ತಿ ಉದ್ದೇಶಕ್ಕೆ ದೇಶ- ವಿದೇಶದ ಉದ್ಯಮಿಗಳಿಂದ ದೇಣಿಗೆ ಪಡೆದು ಅದನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ನೀಡುತ್ತಿದ್ದವು ಎಂಬ ಆರೋಪಗಳ ಸಂಬಂಧ ಅಕ್ಟೋಬರ್ 8ರಂದು ಎನ್‌ಐಎ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ಎನ್‌ಜಿಒಗಳು 2000ನೇ ಇಸವಿಯಲ್ಲಿ ಸ್ಥಾಪಿತವಾಗಿವೆ.
ಈ ನಡುವೆ ಎನ್ಐಎ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಪಿಡಿಪಿ ತೀವ್ರ ಕಿಡಿಕಾರಿದ್ದು, ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಆರೋಪಿಸಿದ್ದಾರೆ.
Follow us on Social media