ಬೆಂಗಳೂರು: ಮೈಸೂರಿನಲ್ಲಿ ನಡೆಯುತ್ತಿರುವ ವೈದ್ಯರ ಪ್ರತಿಭಟನೆ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಆಕ್ರೋಶ ಹೊರಹಾಕಿ, ಪ್ರತಿಭಟನೆ ಮಾಡುವವರು ಇಷ್ಟವಿದ್ದರೆ ಕೆಲಸ ಮಾಡಲಿ, ಇಲ್ಲದಿದ್ದರೆ ಅವರ ದಾರಿ ನೋಡಿಕೊಳ್ಳಲಿ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾರ್ಯದ ಒತ್ತಡ ಸ್ವೀಕಾರ ಮಾಡಿ ಕೆಲಸ ಮಾಡುವವರು ಸರ್ಕಾರದಲ್ಲಿರಬೇಕು. ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸಮಾಡಲಿ ಎಂದರು ಗರಂ ಆದರು.
ಪ್ರತಿಭಟನೆ ಕರೆ ಕೊಟ್ಟವರಿಗೆ ಗಣೇಶ ಹಬ್ಬದ ದಿನ ಆ ದೇವರು ಸದ್ಬುದ್ಧಿ ಕೊಡಲೆಂದು ಆಶಿಸುತ್ತೇನೆ. ಯಾವ ಕಾರಣಕ್ಕೆ ಪ್ರತಿಭಟನೆಗೆ ಪ್ರೇರಣೆ ಕೊಡ್ತಿದ್ದಾರೋ ನಂಗೆ ಗೊತ್ತಿಲ್ಲ. ಆದರೆ, ಆ ಕುಟುಂಬದ ಹೆಣ್ಣುಮಗಳು ಸರ್ಕಾರದ ತೀರ್ಮಾನಗಳಿಗೆ ಒಪ್ಪಿದ್ದಾರೆ. ಅವರ ಸ್ವಂತ ಮಾವಂದಿರು ಸಹ ಸರ್ಕಾರದ ಕ್ರಮಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದರ ನಡುವೆ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಅಮಾಯಕ ವೈದ್ಯರನ್ನು ಕೂರಿಸಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಯಾರಿಗೂ ಕೂಡ ಶೋಭೆ ತರುವಂತಹದ್ದಲ್ಲ ಎಂದು ಟೀಕಿಸಿದರು.
ಇದೇ ವೇಳೆ ಸಿಇಒ ಅಮಾನತ್ತು ಬೇಡಿಕೆಯನ್ನು ತಳ್ಳಿಹಾಕಿದ ಸುಧಾಕರ್, ಯಾರನ್ನು ಯಾವ ಕಾರಣಕ್ಕೆ ಅಮಾನತು ಮಾಡಬೇಕೆಂದು ನನಗೆ ಗೊತ್ತಿದೆ. ನಾನೇ ಮಂತ್ರಿಯಾಗಿ ಇಷ್ಟು ಪರೀಕ್ಷೆ ಮಾಡಿ ಎಂದು ಡಿಸಿ ಹಾಗೂ ಸಿಇಒಗೆ ಟಾರ್ಗೆಟ್ ಕೊಡುತ್ತೇನೆ. ಕಾರ್ಯದ ಒತ್ತಡ ಸ್ವೀಕಾರ ಮಾಡಿ ಕೆಲಸ ಮಾಡುವವರು ಸರ್ಕಾರದಲ್ಲಿರಲಿ. ಇಲ್ಲವಾದರೆ ಅವರು ಸ್ವತಂತ್ರರಿದ್ದಾರೆ. ಬೇಕಾದರೆ ಖಾಸಗಿಯಲ್ಲಿ ಕೆಲಸ ಮಾಡಲಿ ಎಂದು ನಿಷ್ಠುರವಾಗಿ ಹೇಳಿದರು.
ಮೃತ ನಾಗೇಂದ್ರ ಹೆಂಡತಿ ಈ ಬಗ್ಗೆ ವಿರೋಧಿಸಲಿ ಅಥವಾ ಮಾತನಾಡಲಿ ಆಗ ನಾನು ಒಪ್ಪುತ್ತೇನೆ. ಅದು ಬಿಟ್ಟು ಯಾವನೋ ದಾರಿಯಲಿ ಹೋಗುವವನು ಮಾತನಾಡಿದರೆ ಹೆದರಲ್ಲ. ಅಲ್ಲಿ ಪ್ರತಿಭಟನೆಗೆ ಕುಳಿತಿರುವುದು ಯಾರೆಂದು ನನಗೆ ಗೊತ್ತಿದೆ. ಎಂಎಲ್ಸಿಗೆ ನಿಂತು ಸೋತಿರುವವನು ಎಲ್ಲರನ್ನು ಎತ್ತಿಕಟ್ಟಿದ್ದಾರೆಂದು ಪರೋಕ್ಷವಾಗಿ ರವೀಂದ್ರ ವಿರುದ್ಧ ಆಕ್ರೋಶ ಹೊರಹಾಕಿದರು.
Follow us on Social media