ಬೆಂಗಳೂರು: ಮಾರಕ ಕೊರೋನಾ ವೈರಸ್ ತಾರಕಕ್ಕೇರಿರುವ ಈ ಹೊತ್ತಿನಲ್ಲಿ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜುಲೈ ತಿಂಗಳಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿರುವ ಹೊತ್ತಿನಲ್ಲೇ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಇನ್ನೆರಡು ತಿಂಗಳು ಶಾಲೆಗಳ ಆರಂಭಿಸುವುದು ಸೂಕ್ತವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಇನ್ನೂ 2 ತಿಂಗಳ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ. ಕರ್ನಾಟಕದಲ್ಲಿ ಕೊರೋನಾ ಸೋಂಕು ನಿಯಂತ್ರಣ ಮೀರಿ ಹರಡುತ್ತಿದೆ. ಹೀಗಾಗಿ, ಈಗಲೇ ಶಾಲೆಗಳನ್ನು ಆರಂಭಿಸುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇನ್ನೂ 2 ತಿಂಗಳು ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಅವಸರದ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಶಾಲೆಗಳನ್ನು ಜುಲೈ ತಿಂಗಳಲ್ಲಿ ಪುನರಾರಂಭಿಸುವ ಪ್ರಸ್ತಾಪವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಡಿದ್ದಾರೆ. ಇದರಿಂದ ಪೋಷಕರಿಗೆ ಆತಂಕ ಶುರುವಾಗಿದ್ದು, ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪೋಷಕರ ಆತಂಕ ಮತ್ತು ಮಕ್ಕಳ ಆರೋಗ್ಯವನ್ನು ಸಚಿವರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬ್ರಿಟನ್, ಫ್ರಾನ್ಸ್, ಇಟಲಿ ಸೇರಿದಂತೆ ಬೇರೆ ದೇಶಗಳಲ್ಲಿ ಶಾಲೆಗಳನ್ನು ಪುನರಾರಂಭಿಸಿದ ನಂತರ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಹೆಚ್ಚಾಗಿ ತಗುಲಿದೆ. 2 ತಿಂಗಳ ನಂತರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಬಳಿಕ ಶಾಲೆಗಳ ಮರು ಆರಂಭದ ಬಗ್ಗೆ ಯೋಚನೆ ಮಾಡುವುದು ಸೂಕ್ತ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
Follow us on Social media