ಬೆಂಗಳೂರು: ಬೆಂಗಳೂರು: ರಾಜರಾಜೇಶ್ವರಿ ನಗರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡುವ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸಿದ್ದು, ಇದಕ್ಕೆ ಸಿದ್ದರಾಮಯ್ಯ ಪೋಲಿಸರು, ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಯಶವಂತಪುರ ಬಿ.ಕೆ.ನಗರದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಭಾಷಣಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸಿ, ಅವರ ವಾಹನವನ್ನು ತಡೆದು ವಾಪಸ್ ಹೋಗುವಂತೆ ಆಗ್ರಹಿಸಿದ ಘಟನೆ ನಡೆದಿದೆ.
ಆದರೆ, ಸಿದ್ದರಾಮಯ್ಯ ಪ್ರಚಾರ ಮಾಡದೇ ವಾಪಸ್ ಹೋಗಲು ನಿರಾಕರಿಸಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಗೂಂಡಾಗಳನ್ನು ಕಳುಹಿಸಿ ಬೆದರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅವರನ್ನು ಬಂಧಿಸದಿದ್ದರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪೋಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಸಂಬಂಧ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ “ನಾನು ಪ್ರಚಾರಕ್ಕೆ ಬಂದಿರುವುದನ್ನು ಕಂಡು ಸೋಲಿನ ಭೀತಿಗೀಡಾಗಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ, ರೌಡಿಸಂ ಮೂಲಕ ಮತದಾರರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಗೂಂಡಾಗಿರಿಗೆ ನಾವು ಹೆದರುವವರಲ್ಲ.
ಇದಕ್ಕೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಹುಷಾರ್ !” ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ಪಕ್ಷ ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಘಟನೆ ಬಗ್ಗೆ ಹೇಳಿಕೊಂಡಿದ್ದು “ಆರ್.ಆರ್ ನಗರ ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನಂ ನಾಯ್ಡು ಬೆಂಬಲಿಗರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಭಾಷಣಕ್ಕ ಅಡ್ಡಿಪಡಿಸಿ ದಾಂಧಲೆ ನಡೆಸಿದರು. ಇದನ್ನು ಖಂಡಿಸಿದ ಸಿದ್ದರಾಮಯ್ಯ ಅವರು ಈ ಗೂಂಡಾಗಿರಿಗೆ ಕಡಿವಾಣ ಹಾಕದಿದ್ದರೆ ಹೋರಾಟ ನಡೆಸುವುದಾಗಿ ಪೊಲೀಸ್ ಆಯುಕ್ತರಿಗೆ ಎಚ್ಚರಿಕೆ ನೀಡಿದರು.” ಎಂದಿದೆ.
Follow us on Social media