ಬೆಂಗಳೂರು : ಮಾರಕ ಕೊರೋನಾ ವೈರಸ್ ಗೆ ಕರ್ನಾಟಕ ರಾಜ್ಯ ತತ್ತರಿಸಿ ಹೋಗುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಒತ್ತಡಕ್ಕೊಳಗಾಗಿರುವ ಆರೋಗ್ಯ ಇಲಾಖೆ ಗೊಂದಲದ ಗೂಡಾಗಿದ್ದು, ಇಲಾಖೆಯ ಒಂದೊಂದೇ ಎಡವಟ್ಟುಗಳು ಇದೀಗ ಬಯಲಾಗುತ್ತಿವೆ.
ಹೌದು.. ಈ ಹಿಂದೆ ಸೋಂಕು ತಗುಲಿಲ್ಲದ ಪೊಲೀಸ್ ಪೇದೆ ಸೋಂಕಿತ ಎಂಬ ಹಣೆಪಟ್ಟಿ ನೀಡಿದ್ದ ಆರೋಗ್ಯ ಇಲಾಖೆ ಇದೀಗ ಮತ್ತೊಮ್ಮೆ ಅಂತಹುದೇ ಪ್ರಮಾದ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಈ ಹಿಂದೆ ಗರ್ಭಿಣಿಗೆ ಸೋಂಕಿದೆ ಎಂದು ಹೇಳಲಾಗಿದ್ದ ವರದಿ ಇದೀಗ ಸುಳ್ಳು ಎಂದು ಹೇಳಲಾಗುತ್ತಿದ್ದು, ಗರ್ಭಿಣಿಗೆ ಸೋಂಕಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬೆಂಗಳೂರಿನ ಬಿಟಿಎಂ ಲೇಔಟ್ನ ಗರ್ಭಿಣಿಗೆ ಕೊರೋನಾ ಪಾಸಿಟಿವ್ ಅಂತಾ ರಿಪೋರ್ಟ್ ಬಂದಿತ್ತು. ಆದರೆ ನಿನ್ನೆ ಗರ್ಭಿಣಿಗೂ ಸೋಂಕೇ ತಗುಲಿಲ್ಲ ಅನ್ನೋ ಸ್ಫೋಟಕ ಸಂಗತಿ ಬಯಲಾಗಿದೆ. ಈ ಕೇಸ್ನಲ್ಲೂ ಆರೋಗ್ಯ ಇಲಾಖೆ ಎಡವಟ್ಟು ಮಾಡಿಕೊಂಡಿದ್ದು, ಖಾಸಗಿ ಲ್ಯಾಬ್ ಕೊಟ್ಟ ಸುಳ್ಳು ರಿಪೋರ್ಟ್ನಿಂದ ಗರ್ಭಿಣಿ ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್ಗೆ ಶಿಫ್ಟ್ ಆಗಿದ್ದರು. ಮತ್ತೊಮ್ಮೆ ಸರ್ಕಾರಿ ಲ್ಯಾಬ್ನಲ್ಲಿ ಸ್ಯಾಂಪಲ್ ಪರೀಕ್ಷಿಸಿದಾಗ ನೆಗೆಟಿವ್ ರಿಪೋರ್ಟ್ ಬಂದಿದೆ. ಇದೀಗ ಮತ್ತೆ 14 ದಿನಗಳ ಕಾಲ ಗರ್ಭಿಣಿಗೆ ಕ್ವಾರಂಟೈನ್ ವಿಧಿಸಲಾಗಿದೆ.
ಖಾಸಗಿ ಲ್ಯಾಬ್ಗಳ ಕಾರ್ಯದಕ್ಷತೆ ಮೇಲೆಯೇ ಅನುಮಾನ!
ಈ ಹಿಂದೆ ಬೇಗೂರು ಪೊಲೀಸ್ ಠಾಣೆಯ ಪೇದೆಗೆ ಸೋಂಕಿತ್ತು ಎಂದು ವರದಿಯಲ್ಲಿ ಹೇಳಲಾಗಿತ್ತು. ಆ ಬಳಿಕ ಆತನ ವರದಿ ನೆಗೆಟಿವ್ ಬಂದಿತ್ತು. ಈ ಪ್ರಕರಣ ಬೆಳಕಿಗೆ ಬಂದ ಕೇವಲ 24 ಗಂಟೆಗಳ ಅವಧಿಯಲ್ಲೇ ಮತ್ತೊಂದು ಅಂತಹುದೇ ಪ್ರಕರಣ ಬೆಳಕಿಗೆ ಬಂದಿದ್ದು, ಖಾಸಗಿ ಲ್ಯಾಬ್ ಗಳ ವರದಿಗಳನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಖಾಸಗಿ ಲ್ಯಾಬ್ ಗಳ ಕಾರ್ಯವೈಖರಿ ಬಗ್ಗೆಯೇ ಅನುಮಾನ ವ್ಯಕ್ತವಾಗುತ್ತಿದ್ದು, ಖಾಸಗಿ ಲ್ಯಾಬ್ನ ಮಾನ್ಯತೆ ರದ್ದು ಮಾಡೋ ಬಗ್ಗೆಯೂ ಚಿಂತನೆ ಕೂಡ ಸರ್ಕಾರದ ಮಟ್ಟದಲ್ಲಿ ಕೇಳಬರುತ್ತಿದೆ.