ಹುಬ್ಬಳ್ಳಿ: ಕೊರೊನಾ ಸೋಂಕಿನ ಕಾರಣದಿಂದ ವಾಣಿಜ್ಯ ನಗರಿಯಿಂದ ಮುಂಬೈಗೆ ರದ್ದಾಗಿದ್ದ ಇಂಡಿಗೊ ಸಂಸ್ಥೆಯ ನೇರ ವಿಮಾನ ಸಂಚಾರ ಆಗಸ್ಟ್ 25ಕ್ಕೆ ಪುನರಾರಂಭವಾಗಲಿದೆ.
ಇದೇ ಸಂಸ್ಥೆಯ ವಿಮಾನಗಳು ಈಗಾಗಲೇ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಕೇರಳದ ಕಣ್ಣೂರಿಗೆ ಸಂಚರಿಸುತ್ತಿವೆ. 25ರಿಂದ ನಗರದಿಂದ ಮುಂಬೈ, ಅಹಮದಾಬಾದ್, ಚೆನ್ನೈ, ಮಂಗಳೂರು ಮತ್ತು ಕೊಚ್ಚಿಗೆ ಸಂಚಾರ ಆರಂಭಿಸಲಿವೆ ಎಂದು ಇಂಡಿಗೊ ಸಂಸ್ಥೆ ಸಿಬ್ಬಂದಿ ತಿಳಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.
ಸ್ಟಾರ್ ಏರ್ ಸಂಸ್ಥೆಯ ವಿಮಾನಗಳು ಆ. 16ರಿಂದ ಇಲ್ಲಿಂದ ದೆಹಲಿಯ ಹೊರವಲಯದ ಪ್ರದೇಶ ಹಿಂಡನ್ ಮತ್ತು ಬೆಂಗಳೂರಿಗೆ ಸಂಚಾರ ಆರಂಭಿಸಲಿವೆ. ವಾರದಲ್ಲಿ ನಾಲ್ಕು ದಿನ ಸೋಮವಾರ, ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಹಿಂಡನ್‌ಗೆ ವಿಮಾನ ಸಂಚರಿಸಲಿದೆ.
ಭಾರತದಲ್ಲಿ ಲಾಕ್‌ಡೌನ್ ಘೋಷಣೆಯಾದಾಗ ಮೊದಲು ಎಲ್ಲ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಮೇ 25ಕ್ಕೆ ಸಂಚಾರ ಪುನರಾರಂಭವಾದಾಗ ಪ್ರಯಾಣಿಕರ ಕೊರತೆ ಕಾಡಿದ್ದರಿಂದ ಮತ್ತೊಮ್ಮೆ ಸ್ಥಗಿತಗೊಳಿಸಲಾಗಿತ್ತು.
Follow us on Social media