ಬೆಂಗಳೂರು: ಕೋವಿಡ್ -19 ಸೋಂಕಿನಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಂದಾಯ ಸಚಿವ ಆರ್. ಅಶೋಕ್ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪ್ರವಾಹ ನಿರ್ವಹಣೆಯ ಹೊಣೆ ವಹಿಸಲಾಗಿದೆ.
ಕೆಲ ದಿನ ಹೋಮ್ ಕ್ವಾರಂಟೈನ್ ನಲ್ಲಿದ್ದ ಅಶೋಕ್ ಅವರಿಗೆ ಗುರುವಾರ ಕೋವಿಡ್-19 ನೆಗೆಟಿವ್ ದೃಢಪಟ್ಟಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಪರಿಹಾರ, ಸಿದ್ಧತೆಗಳ ಕುರಿತಂತೆ ಗೃಹ, ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳ ತುರ್ತು ಸಭೆ ನಡೆಸಿದರು.
ಮಹಾರಾಷ್ಟ್ರದ ಜಲಾಶಯಗಳಿಂದ ನೀರನ್ನು ಹೊರ ಬಿಡುತ್ತಿರುವುದರಿಂದ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು,ರಾಜ್ಯದ 10 ಜಿಲ್ಲೆಗಳಲ್ಲಿ ತೀವ್ರ ಪ್ರವಾಹ ಹಾಗೂ ಕೆಲವು ಕಡೆಗಳಲ್ಲಿ ಭೂ ಕುಸಿತ ವಾಗುತ್ತಿದೆ. ಮುಖ್ಯಮಂತ್ರಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ರಕ್ಷಣಾ ಮತ್ತು ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುವಂತೆ ಹೇಳಿದ್ದಾರೆ ಎಂದು ಅಶೋಕ್ ತಿಳಿಸಿದರು.
ಸಚಿವರಾದ ಸಿಟಿ ರವಿ, ಬೊಮ್ಮಾಯಿ, ಸೋಮಣ್ಣ ಮತ್ತು ಅಶೋಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಮಳೆ ಭಾದಿತ ಪ್ರದೇಶಗಳಲ್ಲಿ ನಾಗರಿಕ ರಕ್ಷಣಾ, ವಿಪತ್ತು ನಿರ್ವಹಣಾ ಮತ್ತು ಅಗ್ನಿ ಮತ್ತು ತುರ್ತು ಸೇವ ಸಿಬ್ಬಂದಿಯನ್ನು ಮತ್ತಷ್ಟು ಹೆಚ್ಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಫೋನ್ ಕರೆ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿದಿನ ಪರಿಸ್ಥಿತಿ ಪರಾಮರ್ಶೆ ನಡೆಸಲು ತೀರ್ಮಾನಿಸಲಾಯಿತು.
ಮಲೆನಾಡು ಭಾಗದಲ್ಲಿ 277 ಮಿಲಿ ಲೀಟರ್ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ 342 ಮಿಲಿ ಮೀಟರ್ ಮಳೆಯಾಗಿರುವುದರಿಂದ ದೊಡ್ಡ ಪ್ರಮಾಣದ ಹಾನಿ ಹಾಗೂ ಭೂಕುಸಿತವಾಗಿದೆ ಎಂದು ಅಶೋಕ್ ತಿಳಿಸಿದರು.
ಬೆಳಗಾವಿ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉಡುಪಿ, ದಕ್ಷಿಣ ಕನ್ನಡ, ಧಾರವಾಡ, ಕೊಡಗು, ಮೈಸೂರು ಮತ್ತು ಉತ್ತರ ಕನ್ನಡ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ. ಸರ್ಕಾರದಿಂದ ಈವರೆಗೂ ರಾಜ್ಯಾದ್ಯಂತ 12 ಪರಿಹಾರ ಕ್ಯಾಂಪ್ ಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.
Follow us on Social media