ಬೆಂಗಳೂರು: ಇ-ವೇ ಬಿಲ್ ದುರ್ಬಳಕೆ ಸೇರಿದಂತೆ ಸರಕು ಸಾಗಣೆಯಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮ ಪತ್ತೆಗೆ ಕಟ್ಟುನಿಟ್ಟಿನ ಕ್ರಮ ವಹಿಸಿ, ಅಕ್ರಮ ಎಸಗುವ ಸರಕು ಸಾಗಣೆ ಕಂಪನಿಗಳಿಗೆ ದಂಡ ವಿಧಿಸುವ ಜೊತೆಗೆ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ವಾಣಿಜ್ಯ ತೆರಿಗೆ ಅದಿಕಾರಿಗಳ ಸಭೆ ನಡೆಸಿ ರಾಜ್ಯದ ತೆರಿಗೆ ಸಂಗ್ರಹ ಸ್ಥಿತಿಗತಿ ಪರಿಶೀಲಿಸಿದ ಸಿಎಂ, ಸರ್ಕಾರಕ್ಕೆ ಬರುವ ಯಾವುದೇ ಆದಾಯವೂ ಸೋರಿಕೆಯಾಗಬಾರದು. ಹಾಗೇನಾದರೂ ಆದರೆ ಇಂದಿನ ಕೊರೋನಾ ಲಾಕ್’ಡೌನ್ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಲಿದೆ. ಇದಕ್ಕೆ ಅಧಿಕಾರಿಗಳ ಸಹಕಾರ ದೊಡ್ಡದಿದೆ. ಸರಕು ಸಾಗಣೆಯಲ್ಲಿ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಿ. ಅಕ್ರಮ ಎಸಗುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಿ ಅವರ ವಿರುದ್ಧ ಕಾನೂನು ಕ್ರಮವನ್ನೂ ಕೈಗೊಳ್ಳಿ ಎಂದು ತಿಳಿಸಿದ್ದಾರೆ.
ಅಲ್ಲದೆ ರೂ.40 ಗಳಿಗೂ ಹೆಚ್ಚಿವ ವ್ಯವಹಾರ ಇರುವ ಸಾರಿಗೆ ಡೀಲರುಗಳು ಹಾಗೂ ಮಾಸಿಕ ರೂ.20 ಗಳಿಗೂ ಹೆಚ್ಚು ಬಾಡಿಗೆ ಸಂಗ್ರಹಿಸುವ ನಗರ ಪ್ರದೇಶಗಳ ವಾಣಿಜ್ಯ ಸಂಕೀರ್ಣಗಳ ಸಮೀಕ್ಷೆ ನಡೆಸಿ ವರದಿ ನೀಡುವಂತೆಯೂ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಸರಕು ಸಾಗಣೆ ಅಕ್ರಮ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು, ಇದಕ್ಕಾಗಿ ರಸ್ತೆ ಜಾಗೃತಿ ತಂಡಗಳನ್ನು 77 ರಿಂದ 116ಕ್ಕೆ ಹೆಚ್ಚಿಸಲಾಗಿದೆ. ಈ ತಂಡಗಳು 2.82 ಲಕ್ಷ ಸರಕು ವಾಹನಗಳು ಹಾಗೂ 7.43 ಲಕ್ಷ ಇ ವೇ ಬಿಲ್ ಗಳನ್ನು ಪರಿಶೀಲಿಸಿವೆ ಇದರಲ್ಲಿ 300 ಅಕ್ರಮ ಪತ್ತೆಯಾಗಿದ್ದು, ರೂ.6.21 ಕೋಟಿ ತೆರಿಗೆ ಹಾಗೂ ದಂಡ ಸಂಗ್ರಹಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Follow us on Social media